ಎಕ್ಕುವುದು-
	ಸ್ವಾಭಾವಿಕ ಅಥವಾ ಕೃತಕ ಎಳೆಗಳಿಂದ (ಫೈಬರ್ಸ್) ದಾರವನ್ನು ತಯಾರಿಸುವಲ್ಲಿನ ಒಂದು ವಿಧಾನ (ಕಾರ್ಡಿಂಗ್). ಒಂದು ಕಡೆಯಿಂದ ಮತ್ತೊಂದು ಕಡೆ ರವಾನಿಸುವುದಕ್ಕೂ ಸಂಗ್ರಹಿಸಿಡುವುದಕ್ಕೂ ಅನುಕೂಲವಾಗುವಂತೆ ಹತ್ತಿ, ಉಣ್ಣೆ, ಕೃತಕ ಎಳೆ ಇತ್ಯಾದಿಗಳನ್ನು ಅಮುಕಿ ದಮ್ಮಸ ಮಾಡಿ ಸಣ್ಣ ಘನಾಕಾರದ ಬೇಲುಗಳಾಗಿ ಮಾಡುವರು. ಅನಂತರ ಗಿರಣಿಗಳಲ್ಲಿ ದಾರ ಮಾಡುವಾಗ ಮೊದಲು ಆ ಬೇಲುಗಳನ್ನು ಉಣ್ಣೆ, ಹತ್ತಿಯನ್ನು ಬೇರೆ ಮಾಡಿ ಯಂತ್ರಗಳ ಮೂಲಕ ಬಿಡಿ ಬಿಡಿಮಾಡಿ ಸಣ್ಣ ಸಣ್ಣ ಗೊಂಚಲುಗಳಾಗಿ ಮಾಡುವುದು ಮೊದಲ ಹಂತ. ಗೊಂಚಲುಗಳಲ್ಲಿರುವ ಒಂದೊಂದೇ ಎಳೆಯನ್ನು ಆ ಎಳೆಯ ಜೊತೆ ಇತರ ಎಳೆಗಳು ಬರದಿರುವಂತೆ ಎಳೆಯುತ್ತಾರೆ. ಅಂದರೆ ಪ್ರತಿ ಎಳೆಯೂ ಪ್ರತ್ಯೇಕ ಪ್ರತ್ಯೇಕವಾಗಿ ಬರುವಂತೆ ಈ ಕೆಲಸ ಸಾಗುತ್ತದೆ. ಇದರಿಂದ ಮುಂದಿನ ಕ್ರಮಗಳಲ್ಲಿ ಹಸನಾದ, ಏಕಪ್ರಕಾರದ ಗಟ್ಟಿ ದಾರವನ್ನು ತಯಾರಿಸಲು ಸಾಧ್ಯ. ತಕಲಿ ಅಥವಾ ಚರಕದಿಂದ ದಾರ ತೆಗೆಯುವಾಗಾಗಲೀ ದೊಡ್ಡ ದೊಡ್ಡ ಯಂತ್ರಗಳಿಂದ ದಾರ ಮಾಡುವಾಗಾಗಲೀ ಈ ವಿಧಾನ ಕಡ್ಡಾಯವಾಗಿ ನಡೆದೇ ನಡೆಯುತ್ತದೆ. ತಯಾರಾದ ದಾರಗಳು ಬೇರೆ ಬೇರೆ ಗಾತ್ರದಲ್ಲಿ (ಕೆಲವು ದಪ್ಪನಾಗೂ ಮತ್ತೆ ಕೆಲವು ತೆಳ್ಳಗೂ) ಇರುತ್ತಿವಾದ್ದರಿಂದ ಅವನ್ನು ಗುರುತಿಸಲು ಅವುಗಳಿಗೆ ಬೇರೆ ಬೇರೆ ನಂಬರುಗಳನ್ನು ಕೊಡಲಾಗುತ್ತದೆ. 20ನೆಯ ನಂಬರಿನ ನೂಲು 40ನೆಯ ನಂಬರಿನ ನೂಲು-ಮುಂತಾಗಿ ಬೇರೆ ಬೇರೆ ದರ್ಜೆಯವಿರುತ್ತವೆ. ನಂಬರು ಹೆಚ್ಚಾದಷ್ಟೂ ದಾರದ ದಪ್ಪ ಹೆಚ್ಚು. ಸಾಮಾನ್ಯವಾಗಿ ಒಂದು ಗೊತ್ತಾದ ತೂಕದ ದಾರದ ಮೇಲೆ ಈ ನಂಬರುಗಳನ್ನು ಗುರುತಿಸಿರುತ್ತಾರೆ. ಒಂದು ಸೆಂಟಿಮೀಟರ್ ಉದ್ದ ಇರುವ ದಾರದ ತೂಕ, ಆ ದಾರದಲ್ಲಿರುವ ಎಳೆಗಳ ಒಟ್ಟು ಸಂಖ್ಯೆಯಷ್ಟೇ ಇರುತ್ತದೆ. ಏಕಪ್ರಕಾರದ ದಾರ ಬರಬೇಕಾದಲ್ಲಿ, ಒಂದು ಗೊತ್ತಾದ ತೂಕದ ದಾರದಲ್ಲಿ ಅಷ್ಟೇ ಸಂಖ್ಯೆಯ ಎಳೆಗಳಿರಬೇಕು. ದಪ್ಪನೆಯ ದಾರದಲ್ಲಿ ಹೆಚ್ಚು ಸಂಖ್ಯೆಯ ಎಳೆಗಳೂ ತೆಳ್ಳನೆಯ ದಾರದಲ್ಲಿ ಕಡಿಮೆಸಂಖ್ಯೆಯ ಎಳೆಗಳೂ ಇರುತ್ತವೆ. ಆದ್ದರಿಂದ ಮುಖ್ಯವಾಗಿ ಒಂದು ಗುಂಪು ಅಥವಾ ಗೊಂಚಲಿನ ಎಳೆಗಳಿಂದ ದಾರ ಮಾಡಬೇಕಾದರೆ ಆ ಗುಂಪಿನಲ್ಲಿರುವ ಎಳೆಗಳನ್ನು ಕ್ರಮಕ್ರಮವಾಗಿ ಎಳೆದು ಜೋಡಿಸಿ ಒಂದುಗೂಡಿಸಿ ಉದ್ದವಾದ ಅಖಂಡವಾದ ಒಂದೇ ದಪ್ಪ ಉಳ್ಳ ದಾರವಾಗಿ ಪರಿವರ್ತಿಸಬೇಕು. ಇದರ ಕ್ರಮ ಹೀಗಿದೆ: ಗೊಂಚಲು ಗೊಂಚಲಾಗಿ ಗುಂಪು ಗುಂಪಾಗಿರುವ ಎಳೆಗಳನ್ನು ಅಖಂಡವಾದ ಒಂದೇ ದಟ್ಟವನ್ನು ಹೊಂದಿರುವ ನೀಳವಾದ ಹಂಜಿ (ಸ್ಲೈವರ್) ರೂಪಕ್ಕೆ ತಂದು, ಅನಂತರ ಅದನ್ನು ಸೇವಿಗೆ ಮಾಡುವಂತೆ ಕ್ರಮಕ್ರಮವಾಗಿ ತೆಳ್ಳತೆಳ್ಳಗೆ ಎಳೆದು (ಡ್ರಾಫ್ಟಿಂಗ್), ಬೇಕಾದಷ್ಟು ದಟ್ಟತೆಯಿರುವ ದಾರದ ರೂಪಕ್ಕೆ ತರಬೇಕು. ಈ ಕಾರ್ಯ ಯಶಸ್ವಿಯಾಗಬೇಕಾದರೆ ಆ ಹಂಜಿಯಲ್ಲಿರುವ ಎಳೆಗಳು ಗೊಂಚಲು ಗೊಂಚಲಾಗಿರದೆ ಬಿಡಿಬಿಡಿಯಾಗಿರಬೇಕಾದ್ದು ಅಗತ್ಯ. ಇಲ್ಲದಿದ್ದಲ್ಲಿ ಹಂಜಿಯನ್ನು ತೆಳ್ಳಗೆ ಮಾಡುವಾಗ ಎಳೆಯನ್ನು ಎಳೆದರೆ, ಎಳೆಗಳು ಗುಂಪು ಗುಂಪಾಗಿ ಬಂದು ಸರಿಯಾದ ದಾರವನ್ನು ಪಡೆಯುವುದು ಅಸಾಧ್ಯವಾಗುತ್ತದೆ. ಇದರಿಂದಾಗಿ ಎಳೆಗಳನ್ನು ಪೂರ್ವಭಾವಿಯಾಗಿ ಸಂಪೂರ್ಣ ಪ್ರತ್ಯೇಕಿಸುವ ವಿಧಾನದ (ಹಿಂಜುವುದು ಎಕ್ಕುವುದು) ಅಗತ್ಯ ಇಲ್ಲಿ ಕಂಡುಬರುತ್ತದೆ. ಈ ವಿಧಾನದಲ್ಲಿ ಕಚ್ಚಾ ಪದಾರ್ಥದಲ್ಲಿ ಉಳಿದಿರುವ ಕಸ ಕಡ್ಡಿ ಮುಂತಾದುವುಗಳು ಪ್ರತ್ಯೇಕಿಸಲ್ಪಟ್ಟು ಹಂಜು ಶುಭ್ರವಾಗುವುದಲ್ಲದೆ ಎಳೆಗಳೆಲ್ಲವೂ ಚೆನ್ನಾಗಿ ಮಿಶ್ರಗೊಂಡು ಹಂಜಿ ಅಥವಾ ಹಾಳೆಯ ರೂಪದಲ್ಲಿ ಅಂತಿಮ ಪದಾರ್ಥ ದೊರೆಯಲು ಅವಕಾಶವಾಗುತ್ತದೆ.

	ಪಿಂಜಾರಿಗಳು ಒಂದು ಬಿಲ್ಲಿಗೆ ಒಂದು ದಾರ ಕಟ್ಟಿ ಗುಂಡಿನಿಂದ ಎಕ್ಕುವರು. ಚರಕದಲ್ಲಿ ಮತ್ತು ತಕಲಿಯಲ್ಲಿ ದಾರ ತೆಗೆಯುವರು ಕೈಯಿಂದ, ಬಿಲ್ಲಿನ ಸಹಾಯದಿಂದಲೂ ಆಧುನಿಕ ಯಂತ್ರಕ್ಕೆ ಸಮಾನವಾದ ಧೂನೈಮೊಡಿಯ ಎಂಬುವರ ಸಹಾಯದಿಂದಲೂ ಹತ್ತಿಯನ್ನು ಎಕ್ಕುವರು. ಗಿರಣಿಗಳಲ್ಲಿ ದೊಡ್ಡ ದೊಡ್ಡ ಯಂತ್ರಗಳನ್ನು ಬಳಸಲಾಗುತ್ತದೆ.

	ಆಧುನಿಕ ಯಂತ್ರಗಳಲ್ಲಿ ಮುಖ್ಯವಾಗಿ ಎರಡು ನಮೂನೆಗಳಿವೆ: ಒಂದು ರಿವಾಲ್ವಿಂಗ್ ಫ್ಲಾಟ್‍ಕಾರ್ಡ್, ಮತ್ತೊಂದು ರೋಲರ್ ಅಂಡ್ ಕ್ಲಿಯರರ್ ಕಾರ್ಡ್, ಹತ್ತಿಯನ್ನು ಎಕ್ಕುವಾಗ ಫಾಟ್ಲ್‍ಕಾರ್ಡ್ ಯಂತ್ರವನ್ನೇ ಹೆಚ್ಚಾಗಿ ಉಪಯೋಗಿಸುವುದಿದೆ. ಉಣ್ಣೆ ಮತ್ತು ಅಷ್ಟು ನಯವಲ್ಲದ ಇತರ ಒರಟು ಎಳೆಗಳಿಗೆ ರೋಲರ್ ಕಾರ್ಡ್‍ಯಂತ್ರವನ್ನು ಉಪಯೋಗಿಸಲಾಗುವುದು. ಹಾಳೆಯ ರೂಪದಲ್ಲಿರುವ ಹತ್ತಿ ಒಂದು ಫೀಡ್‍ರೋಲರ್ ಮೂಲಕ ನಿಧಾನವಾಗಿ ಮುಂದುಸಾಗುತ್ತದೆ. ಯಂತ್ರದ ಈ ಭಾಗ 9" ಅಡ್ಡಳತೆಯುಳ್ಳದ್ದಾಗಿದ್ದು ಮಿನಿಟಿಗೆ 450-500 ಸಲ ತಿರುಗುವುದಿದೆ. ಇದರ ಪರಿಧಿಯ ಮೇಲೆ ಹಲ್ಲುಗಳಿರುತ್ತವೆ. ಅನಂತರ ಈ ಭಾಗಕ್ಕೆ ಹೊಂದಿಕೊಂಡತ್ತಿದ್ದು 50" ಅಡ್ಡಳತೆಯ, ಮಿನಿಟಿಗೆ 150 ಸಲ ಸುತ್ತುವ ಸಿಲಿಂಡರಿನ (ಉರುಳೆ) ಆಕಾರದ ರೋಲರಿನ ಮೇಲಿರುವ ಮುಳ್ಳುಗಳ ಕೊನೆ < ಆಕಾರದಲ್ಲಿ ಬಗ್ಗಿರುತ್ತವಲ್ಲದೆ ಮೊನಚಾಗಿಯೂ ಇರುತ್ತವೆ. ಇದರಿಂದಾಗಿ ಹತ್ತಿಯನ್ನು ಒಳಗಡೆಗೆ ಬಾಚುವುದು ಸಾಧ್ಯವಾಗುತ್ತದೆ. ಹತ್ತಿ ರೋಲರಿನ ಮೇಲ್ಭಾಗದಲ್ಲಿ ಚಾವಣಿಯಂತಿರುವ ಫ್ಲಾಟ್ ಎಂಬ ಪಟ್ಟಿಗಳಿವೆ. ಇವುಗಳಲ್ಲಿ ಸುಮಾರು 40-45 ಪಟ್ಟಿಗಳನ್ನು ಯಾವಾಗಲೂ ಸಿಲಿಂಡರ್ ಮೇಲ್ಭಾಗದಲ್ಲಿರುವಂತೆ ಅಳವಡಿಸಲಾಗಿದೆ. ಈ ಪಟ್ಟಿಗಳು ಮಿನಿಟಿಗೆ 2"ದಷ್ಟು ಮುಂದೆ ಚಲಿಸುತ್ತದೆ. ಒಂದೊಂದು ಫ್ಲಾಟಿನ ಮೇಲೆ ಸಿಲಿಂಡರಿನ ಮುಳ್ಳುಗಳಂತಿರುವ ಮುಳ್ಳುಗಳಿವೆ. ಇವು ಸಿಲಿಂಡರು ಮುಳ್ಳುಗಳಿಗೆ ವಿರುದ್ಧ ದಿಕ್ಕಿನಲ್ಲಿ ಬಗ್ಗಿರುವವು. ಸಿಲಿಂಡರು ಮುಳ್ಳುಗಳೂ ಫ್ಲಾಟ್‍ಮುಳ್ಳುಗಳೂ ಎದುರು ಬದರಾಗಿ ಹತ್ತಿರ ಹತ್ತಿರ ಇರುವುವು. ವೇಗವಾಗಿ ಚಲಿಸುವ ಸಿಲಿಂಡರಿನ ಮೇಲಿನ ಮುಳ್ಳುಗಳಿಂದ ಮುಂದಕ್ಕೆ ದೂಡಲ್ಪಟ್ಟ ಗೊಂಚಲು ಹತ್ತಿ ಇದಕ್ಕೆ ಎದುರುಭಾಗದಲ್ಲಿ ನಿಧಾನವಾಗಿ ಚಲಿಸುತ್ತಿರುವ ಫ್ಲಾಟ್ ಮೇಲಿನ ಮುಳ್ಳುಗಳಿಂದ ತಡೆಯಲ್ಪಡುತ್ತದೆ. ಹೀಗಾಗುವುದರಿಂದ ಸಿಲಿಂಡರ್ ಮೇಲಿನ ಮುಳ್ಳುಗಳು ಫ್ಲಾಟ್ ಮೇಲಿನ ಮುಳ್ಳುಗಳಿಂದ ಹಿಡಿಯಲ್ಪಟ್ಟು ಹತ್ತಿಗೊಂಚಲುಗಳ ಮೂಲಕ ಪುನಃ ಪುನಃ ಮುಂದೆ ಹಾಯ್ದು, ಹತ್ತಿಯ ಎಳೆಗಳು ಪ್ರತ್ಯೇಕಗೊಳ್ಳುತ್ತವೆ. ಹೀಗೆ ಪ್ರತ್ಯೇಕಗೊಂಡ ಎಳೆಗಳು ಒಂದು ಹಾಳೆಯೋಪಾದಿಯಲ್ಲಿ ಮುಂದುವರಿದು ಡಾಫರ್ ಎಂಬ ಮತ್ತೊಂದು ರೋಲರ್ (ಇದರ ವ್ಯಾಸ 24", ಮಿನಿಟಿಗೆ 8-9 ಸುತ್ತು ಸುತ್ತುವುದು) ಮೇಲಿನ ಮುಳ್ಳುಗಳಿಗೆ ಅಂಟಿಕೊಳ್ಳುವುದು. ಈ ಡಾಫರಿನ ಮೇಲೆಯೂ ಸಿಲಿಂಡರ್ ಮೇಲಿರುವಂತೆಯೇ ಮುಳ್ಳುಗಳಿವೆ. ಈ ಭಾಗದಲ್ಲಿ ಎಕ್ಕಲ್ಪಟ್ಟ ಹತ್ತಿಯ ಹಾಳೆ ಸಿಲಿಂಡರಿನಿಂದ ಪ್ರತ್ಯೇಕಗೊಂಡು, ಮುಂದೆ ಒಂದು ಕೊಂಬೆಯ ಮೂಲಕ ಹಾಯ್ದು ಅದರಿಂದಲೂ ಪ್ರತ್ಯೇಕಗೊಳ್ಳುತ್ತದೆ. ಅನಂತರ ಒಂದು ರಂಧ್ರದ ಮೂಲಕ ಹಾಯ್ದು ಮತ್ತೆ ಒಟ್ಟುಗೂಡಲ್ಪಟ್ಟು ಒಂದು ಸಣ್ಣ ಪಟ್ಟಿಯ ರೂಪದಲ್ಲಿ (ಹಂಜಿ) ಅಖಂಡವಾಗಿ ಒಂದು ಕ್ಯಾನ್‍ಬಳೆಗೆ ಸುತ್ತಿಕೊಳ್ಳುತ್ತದೆ.

	ರೋಲರ್ ಅಂಡ್ ಕ್ಲಿಯರರ್ ಕಾರ್ಡ್ ಯಂತ್ರದ ಕೆಲಸವೂ ಇದೇ ರೀತಿ ನಡೆಯುವುದು. ಸಿಲಿಂಡರ್ ಮೇಲೆ ಫ್ಲಾಟಿನ ಬದಲು 5-6 ಚಿಕ್ಕ ಚಿಕ್ಕ ರೋಲರುಗಳು ಇವೆ. ಫ್ಲಾಟುಗಳ ಸಂಖ್ಯೆ 40-45 ಇರುವೆಡೆ 5-6 ರೋಲರುಗಳಿಗಿಂತ ಹೆಚ್ಚು ರೋಲರುಗಳನ್ನು ಇರಿಸಲು ಸಾಧ್ಯವಿಲ್ಲ. ಈ ಯಂತ್ರವನ್ನು ಒರಟು ಹತ್ತಿ, ಉಣ್ಣೆ, ರೇಷ್ಮೆ ಜುಂಗು ಇತ್ಯಾದಿಗಳಿಂದ ದಟ್ಟನಾದ ಎಳೆಗಳನ್ನು ಮಾಡಲು ಉಪಯೋಗಿಸುವರು. ಇಂಥ ಯಂತ್ರಗಳು ಈಗ ಭಾರತದಲ್ಲೂ ತಯಾರಾಗುತ್ತಿವೆ. 		
 (ಎಸ್.ಎನ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ